Wednesday, 27 May 2015

ನನ್ನದಲ್ಲ ಈ ಕವನ


 ದೂರವಿದ್ದ ಲೇಖನಿ ನನ್ನನ್ನೇ ದುರುಗುಟ್ಟಿ ನೋಡುತ್ತಿತ್ತು. ನೋಡಿದರೂ ನೋಡದೇ, ಸಮಯವಿದ್ದರೂ ಸಮಯ ಮಾಡದೇ ಯಾಕೆ ಒಂದೆರಡು ಪದ ಗೀಚುತ್ತಿಲ್ಲ ? ಎನ್ನುತಿತ್ತು. ಬರೆಯ ಹೋದರೆ ನಾನು, ವಿಷಯಗಳೇ ಸಿಗುತ್ತಿಲ್ಲ. ನಾನು ಅಂದುಕೊಂಡಿದ್ದನ್ನು  ಯಾರೋ ಪುಣ್ಯಾತ್ಮ ಮೊದಲೇ ಬರೆದಿದ್ದಾನಲ್ಲ! ಆದರೂ ಬರೆಯಬೇಕೆನಿಸಿತು. ಮೊದಲೇ ಹೇಳುತ್ತೇನೆ ನನ್ನದಲ್ಲ ಈ ಕವನ ಅ ಆ ಇ ಈ .........ಗೀಚಲು ಶುರು ಮಾಡಿದ್ದ ಆ ದಿನ
ಕೆಂಪು ಚಡ್ಡಿ , ಬಿಳಿ ಅಂಗಿ , ನಿಷ್ಕಲ್ಮಶ ಮನಸ್ಸಿನ ಶಿಕ್ಷಣ
ಕೈ ಹಿಡಿದು ಅಕ್ಷರ ಕಲಿಸುವ ಅಕ್ಕರೆಯೂ ಇತ್ತು ,
ಬಾಸುಂಡೆ ಬರಿಸುವ ಹುಣಸೆ ಮರದ ಬೆತ್ತವೂ ಇತ್ತು
ಅಂತೂ ಇಂತೂ ಎಲ್ಲವೂ ಚೆನ್ನಾಗಿತ್ತು ...

ಮಾಮೂಲಿಯಂತೆ, ಚೆನ್ನಾಗಿಯೇ ಇತ್ತು ಆ ದಿನ
ಶಾಲೆ ಬಿಟ್ಟು ಮನೆಗೆ ಸೇರುವ ತವಕದಲ್ಲಿತ್ತು ಮನ
ಗಂಟೆ ಬಾರಿಸಿದ್ದೂ ಆಯಿತು, ಮನೆ ಸೇರಿದ್ದೂ ಆಯಿತು
ಆದರೆ ಪ್ರತಿದಿನ ಬಂದು ಸೇರುವ ನನ್ನ ಅರಮನೆ ಯಾಕೋ ಮಂಕಾಗಿತ್ತು.



ಬಂದತಕ್ಷಣ ತಲೆ ನೇವರಿಸಿ ಮುದ್ದಿಸುವ ಅಮ್ಮ , ಮನೆಯಲ್ಲಿರಲಿಲ್ಲ
ಹೂಮ್ ವರ್ಕ್ ನ್ನು ದಿಟ್ಟಿಸಿ ನೋಡುವ ಚಿಕ್ಕಮ್ಮ , ದೊಡ್ಡಮ್ಮ ಏನನ್ನೂ ಕೇಳುತಿಲ್ಲ
ಬದಲಾದ ವಾತವರಣದಲಿ ಒಳಗಿಂದ ಬಂದ ಚಿಕ್ಕಮ್ಮ ಎಂದರು ...
ಬೇಗ ಹೊರಡು .....ಎಲ್ಲಿಗೆ ? ಎಂದು ಕೇಳುವಷ್ಟರಲ್ಲಿ,
ಮನೆಯ ಅಂಗಳದಲ್ಲಿ ಬಂದು ನಿಂತಿತೊಂದು ರಿಕ್ಷ .

ಶುರುವಾಯಿತು ಪಯಣ ...ಜೊತೆಗೆ ಪ್ರಶ್ನೆಗಳ ಪ್ರಯಾಣ
ಯಾಕಿಷ್ಟು ಆತುರ ಎಂದು ಕೇಳೋಣ ಅಂದುಕೊಂಡರೆ,
ಅಧಿಕಪ್ರಸಂಗ ಬೇಡ ಎನ್ನುತ್ತಾರೋ ಎಂಬ ಭಯ
ಪ್ರಶ್ನೆಗಳ ಸರಮಾಲೆ ಇದ್ದರೂ ಒಂದು ಪ್ರಶ್ನೆಗಂತೂ ಉತ್ತರ ಸಿಕ್ಕಿತು. ಅದೇನೆಂದರೆ....,
ನಾವು ಹೋಗುವ ಪ್ರಯಾಣ, ಅಜ್ಜಿಮನೆಯ ಕಡೆಗೆ . . .

ನಿರೀಕ್ಷೆಯ ಗುರಿ ತಲುಪಿತು . . .
ಒಂದಿಷ್ಟು  ದೂರದಲ್ಲಿ ನಮ್ಮ ಆಟೋ ಬಂದು ನಿಂತಿತು ...
ಅಜ್ಜಿ ಮನೆಗೆ ಬಂದೆನೆಂಬ ಖುಷಿಯೂ ಇತ್ತು, ಕುತೂಹಲವೂ ಇತ್ತು
ನನ್ನ ಕೈ ಹಿಡಿದ ಚಿಕ್ಕಮ್ಮನಿಗೆ ಆತುರವಿತ್ತು .



ಮನೆ ಕಾನಣುತಲಿದೆ ..ಅದೇ ಮನೆ, ಅದೇ ದಾರಿ
ಆದರೆ, ವಾತವರಣ ಯಾಕೋ ಬದಲಾದಂತಿದೆ.
ಮನೆ ಹತ್ತಿರವಾಗುತ್ತಿದ್ದಂತೆ, ಪ್ರಶ್ನೆಗಳು ಹತ್ತಿರವಾಗುತ್ತಿದ್ದವು .
ಯಾವತ್ತೂ ಇರದ ಅಜ್ಜಿಮನೆಯ ಸುತ್ತ, ಜನ ಜಂಗುಳಿ ಇತ್ತು ...

ಇನ್ನೇನು ಮನೆ ಹತ್ತಿರವಾಗುತ್ತಿದೆ ... ಚಿಕ್ಕಮ್ಮನ ಕೈ ಹಿಡಿತ ಬಿಗಿಯಾಗುತ್ತಿದೆ
ಮನೆ ಸುತ್ತಲೂ ಏನೋ ಹೊಗೆ ಆವರಿಸಿದೆ....
ಗಣಹೋಮ ? ಪೂಜೆ ? ನನ್ನನ್ನು ನಾನು ಪ್ರಶ್ನಿಸುವ ಸಮಯ ...
ಮನೆ ಹತ್ತಿರ ನೆರೆದಿರುವ ಜನ ನೋಡುತಿಹರು ನನ್ನ ...
ನೋಟಗಳು ವಿಭಿನ್ನವಾಗಿತ್ತು, ವಿಶಿಷ್ಟವಾಗಿತ್ತು , ವಿಚಿತ್ರವಾಗಿತ್ತು .



ಪುರೋಹಿತರ ಮಂತ್ರಘೋಷ ಕೇಳುತ್ತಿಲ್ಲ,
ಗಂಟೆ ನಾದವಂತು ಇಲ್ಲವೇ ಇಲ್ಲ,
ಬದಲಾಗಿ ಕೇಳಿಸಲಾರ೦ಭಿಸಿತು ಆರ್ತನಾದ .....
ಆವರಿಸಿದ್ದ ಹೊಗೆ ವಿಕಾರವಾಗಿತ್ತು
ಚಿಕ್ಕಮ್ಮನ ಕೈಯ ಹಿಡಿತ ಸಡಿಲವಾಗಿತ್ತು
ಮನೆಯ ಬಾಗಿಲಿನ ಮುಂದೆ ಕಾಲು ಸ್ಥಬ್ದವಾಗಿತ್ತು ...

ಕಣ್ಣ ಮುಂದೆ ಏನೋ ..ಚಿತ್ರ ...ಆದರೆ ಅದು ವಿಚಿತ್ರ
ಮನೆಯಲ್ಲಿ ನಾ ಹುಡುಕಿದ ತಾಯಿ ಅಲ್ಲಿದ್ದಾಳೆ ..
ಆದರೆ ಆಕೆ ನಗುತ್ತಿಲ್ಲ , ಮಾತನಾಡುತ್ತಿಲ್ಲ , ಬದಲಾಗಿ,
ಅಳುತಿದ್ದಾಳೆ ..ಚೀರುತ್ತಿದ್ದಾಳೆ ...ಒದ್ದಾಡುತ್ತಿದ್ದಾಳೆ ....
ನನ್ನ ನೋಡಿ ಅಸಹನೀಯ ನೋಟ ಬೀರುತ್ತಿದ್ದಾಳೆ ...
ಅವಳ ಸುತ್ತ ಜನರಿದ್ದಾರೆ ...ಸಮಾಧಾನಪಡಿಸುತ್ತಿದ್ದಾರೆ .

ಏನಾಗುತ್ತಿದೆ ಎಂದೇ ಗೊತ್ತಾಗುತ್ತಿಲ್ಲ
ಮನಸ್ಸು , ವಯಸ್ಸು ತುಲನೆಯಾಗುತ್ತಿಲ್ಲ
ಕಣ್ಣು ಗುಡ್ಡೆ ತಿರುಗಿದಾಗ ,
ಅಲ್ಲಿ ಮತ್ತೊಂದು ವಿಚಿತ್ರ ದೃಶ್ಯ ...

ಎತ್ತಿ ಮುದ್ದಾಡುತ್ತಿದ್ದ, ಕೇಳಿದ್ದನ್ನೆಲ್ಲ ಕೊಡುತ್ತಿದ್ದ  ,
ನನ್ನ ಜನ್ಮದಾತ , ಬೋರಲಾಗಿ ಮಲಗಿದ್ದಾನೆ.
ಯಾವತ್ತು ನನ್ನು ಅಪ್ಪಿಕೊಂಡು ಮಲಗುವಾತ
ಏಕಾಂಗಿಯಾಗಿ ಮಲಗಿದ್ದಾನೆ..ಜೊತೆಗೆ ಶೃಂಗಾರ ಬೇರೆ ..
ಆ ವಿಕಾರ ಹೊಗೆ ಅಲ್ಲಿಂದಲೇ ಬರುತ್ತಿದೆ ...

ಆಗ ಶುರುವಾಯಿತು , ನನಗೂ ಭಯ
ಇದ್ದ ಬದ್ದವರೆಲ್ಲ ..ನನ್ನಪ್ಪಿಕೊಂಡರು , ಎತ್ತಿಕೊಂಡರು
ಆಲಿ೦ಗನ ನೀಡಿದರು ...
ಆದರೆ, ಅವೆಲ್ಲವೂ ನನ್ನನ್ನು ಕರಾಳವಾಗಿಸಿತು ...

ಆದರೆ, ಕಣ್ಣಂಚಲ್ಲಿ ನೀರು ಬರುತ್ತಿಲ್ಲ ..
ನನ್ನ ಪ್ರೀತಿಯ ಪಪ್ಪ, ಏಳುತ್ತಾನೆಂಬ ವಿಶ್ವಾಸ,
ತಾಯಿ ನಗುತ್ತಾಳೆ೦ಬ  ವಿಶ್ವಾಸ ,
ಸೇರಿದವರೆಲ್ಲ ಹಿಂದೆ ಹೋಗುತ್ತಾರೆಂಬ ವಿಶ್ವಾಸ ..

ಹೀಗೆಲ್ಲಾ ಆಗುತ್ತದಾ? ಎ೦ಬ ಪ್ರಶ್ನೆ ಒಂದುಕಡೆ
ಇದನ್ನು ಗೃಹಿಸಲು ಸಾಧ್ಯವಾಗದ ವಯಸ್ಸು ಇನ್ನೊಂದು ಕಡೆ
ನಾನಿಟ್ಟ ವಿಶ್ವಾಸದ ಕಟ್ಟೆ ಒಡೆಯಿತು ..ನಿರೀಕ್ಷೆ ಹುಸಿಯಾಯಿತು
ಕೊನೆಗೂ ಅಪ್ಪ ಏಳಲೇ ಇಲ್ಲ, ಬದಲಾಗಿ ಯಾರೋ ಹೊತ್ತುಕೊಂಡು ಹೋದರು .

ತಾಯಿಯ ಅಳು ನಿಲ್ಲಲ್ಲಿಲ್ಲ..,ಬದಲಾಗಿ ಅದು ಅಲ್ಲೇ ಲೀನವಾಗಿತ್ತು
ಆದರೆ, ಒಂದು ವಿಶ್ವಾಸ ಮಾತ್ರ ನಿಜವಾಯಿತು
ಅದೇ...., ಸೇರಿದವರೆಲ್ಲ ಹಿಂದೆ ಹೋಗುತ್ತಾರೆಂಬ ವಿಶ್ವಾಸ ..

ಜನ ಬಂದರು , ಜನ ಹೋದರು .....
ಆ ಸೂತಕದ ವಾತಾವರಣವನ್ನು ಅಲ್ಲೇ ಬಿಟ್ಟು ಹೋದರು
ಆದರೆ, ನನ್ನ ಕಣ್ಣಂಚಲ್ಲಿ ನೀರೇ ಬಂದಿಲ್ಲ ...
ಎಲ್ಲ ಕಣ್ಣೀರನ್ನು ತಾಯಿಯೇ ಕಸಿದುಕೊಂಡಳು ಅನ್ನಿಸಿತು .

ದಿನಗಳುರುಳಿತು...ಕ್ಷಣಗಳುರುಳಿತು....
ಆಕೆ ಒಬ್ಬಳೇ ಕೂತು ಅಳುತಿದ್ದಳು ..
ಆದರೆ, ನನ್ನನ್ನು ನೋಡಿ ನಗುತ್ತಿದ್ದಳು ..
ಪಾಲಿಸಿದಳು , ಪೋಷಿಸಿದಳು , ನನಗೆ ದೇವರಾದಳು
ಆಕೆಗೆ ಎಲ್ಲರೂ ಕೈ ಜೋಡಿಸಿದರು ..


ಆಕೆಯ ನೋಡಿದಾಗಲೆಲ್ಲ ಏನೋ ಬರೆಯಬೇಕೆನಿಸುತಿತ್ತು
ಕಷ್ಟವಾದರೂ ಇಷ್ಟ ಪಟ್ಟು ಬರೆದೆ ...
ಮೊದಲೇ ಹೇಳಿದಂತೆ ಮತ್ತೊಮ್ಮೆ ಹೇಳುತ್ತೇನೆ
ನನ್ನದಲ್ಲ ಈ ಕವನ
ಇದು ಕಥನ , ಜೀವನ , ನೆನಪಿಸೋ ಪ್ರಯತ್ನ .....

;;;;;;;;;;;;;;;;;;;;;;;;;;;;;;;;;;;;;;;


No comments:

Post a Comment