ದೇವರು ಬಂದರೆ?
ನಮ್ಮೂರಿನಲ್ಲೊಂದು ಬಲು ವೈಭವದ ಜಾತ್ರೆ
ಸುತ್ತೂರ ಜನರಿಂದ ಹತ್ತೂರು ಸೇರುವ
ರಥ ಬೀದಿಯಲ್ಲೊಂದು ತೇರನೆಳೆಯುವ ಯಾತ್ರೆ
ರಥ ಎಳೆಯುವ ಹೊತ್ತು ಪ್ರಾಂಗಣದಿ ಜನ ಸುತ್ತು
ಸಾಗುತಿದೆ ರಥ ಮುಂದೆ ದೇವರನು ಹೊತ್ತು
ಪೂಜೆ ನೈವೇದ್ಯದಲಿ,ಗಂಟೆ ಜಯಘೋಷದಲಿ
ರಥದ ಕಿರು ಸಂಧಿಯಲಿ ಇಣುಕಿದರು ದೇವರು ನೆರೆದವರನೆಲ್ಲ
ಅದ್ರಶ್ಯವಾಗಿರುವ ನನ್ನ ಮೇಲಿನ ಭಕ್ತಿ ಪ್ರತ್ಯಕ್ಷವಾದರೆ ಹೇಗನಿಸಿತು?
ಹೇಗೆ ನಾ ಕಾಣಿಸಲಿ? ಯಾವ ವೇಶದಿ ಬರಲಿ?
ಹೇಗೆ ನಾ ನಂಬಿಸಲಿ? ಯಾರ ನಾ ಸಂಧಿಸಲಿ?
ಪ್ರಶ್ನೆಯದು ಕಾಡಿತು ದೇವರಲ್ಲಿ
ವಜ್ರ ಕಿರೀಟದಲಿ ಭವ್ಯ ಪೋಷಾಕಿನಲಿ
ಪಾಶುಪತಾಸ್ತ್ರವ ಹಿಡಿದು ಪ್ರತ್ಯಕ್ಷವಾಗಲೆ ?
ಅದಾಗಲೇ ಅಲ್ಲಿ ರಂಗಸ್ಥಳದ ಮೇಲೆ ಚೆಂಡೆ ಮದ್ದಳೆ ಜೊತೆಗೆ
ಧರೆಗಿಳಿದು ಬಂದಿತ್ತು ದೇವಲೋಕ
ಎಲ್ಲರಿಗು ಪ್ರಿಯವಾದ ವೇಷವಿದು ಮಗುವಿನದು
ಕಂದನಲಿ ದೇವರನು ಕಾಣುವರು ಇಲ್ಲಿ
ಆದರು ನೆನಪಿರಲಿ ನಿನ್ನ ರೂಪವ ಅರಿವ ಪ್ರಹ್ಲಾದ ಇಲ್ಲಿಲ್ಲ
ಅನಾಥನ ಹಣೆಪಟ್ಟಿ ಮಗುವಿಗು ಬಿಟ್ಟಿಲ್ಲ..
ಹರಕು ಬಟ್ಟೆಯ ತೊಟ್ಟು, ಹೆಗಲಲ್ಲಿ ಜೋಳಿಗೆ
ಭವತಿ ಭಿಕ್ಷಾಂದೇಹಿ ಎಂದು ಸುತ್ತಾಡಲೆ ?
ಹಳೆ ಭಿಕ್ಷೆ ಪಾತ್ರೆಗಳೆ ಸಾಲಾಗಿ ಕಾದಿರಲು
ಹಸಿದ ಹೊಟ್ಟೆಯ ಮುಂದೆ ನೀನ್ಯಾವ ದೇವರು…..?
ಭೂಲೋಕದ ತುಂಬ ವೇಷವದು ಹಲವು
ನನ್ನ ಪಾತ್ರವು ಇಲ್ಲಿ ಮೂರ್ತಿಯಲಿ ಲೀನ
ನಾನು ಹೋದರೆ ಈಗ ಬರಿವೇಷವಾದೇನು
ಇದನರಿತ ಭಗವಂತ ಸೂತ್ರವೇ ಸಾಕೆಂದ
ರಥವಿಳಿದು ಗರ್ಭಗುಡಿಯೊಳಗೆ ತಾ ಹೊಕ್ಕ
ಮನೆಮನೆಯ ಚಿತ್ರಪಟದೊಳಗೆ ನಸು ನಕ್ಕ
ಬ್ರಹ್ಮಕಲಶಕೆ ಮೊದಲು ಹ್ರದಯ ಕಲಶವ ಬೆಳಗು
ಅಲ್ಲಿಹುದು ನನ್ನ ಗುಡಿ ಭೇಟಿಯಾಗುವೆನೆಂದ …
No comments:
Post a Comment